
ರಾಮದುರ್ಗ ಹಳೆ ಬಸ್ ನಿಲ್ದಾಣದಲ್ಲಿ ಮೂಲಸೌಕರ್ಯ ಕೊರತೆ: ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಆಕ್ರೋಶ
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕು ಕೇಂದ್ರದ ಹಳೆಯ ಬಸ್ ನಿಲ್ದಾಣದಲ್ಲಿ ಕನಿಷ್ಠ ಸೌಲಭ್ಯಗಳ ಕೊರತೆಯಿಂದಾಗಿ ಗ್ರಾಮೀಣ ಭಾಗದಿಂದ ಶಾಲಾ-ಕಾಲೇಜುಗಳಿಗೆ ಆಗಮಿಸುವ ನೂರಾರು ವಿದ್ಯಾರ್ಥಿಗಳು ಹಾಗೂ ದಿನನಿತ್ಯದ ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರತಿದಿನ ಸಾವಿರಾರು ಜನರು ಪ್ರಯಾಣಿಸುವ ಈ ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯದ ವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ.
ಬಸ್ ನಿಲ್ದಾಣದ ಆವರಣದಲ್ಲಿ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕವು ಬಾಗಿಲು ಮುಚ್ಚಿ ನಿಷ್ಕ್ರಿಯಗೊಂಡಿದೆ. ಅಲ್ಲದೆ, ನಳಗಳು ಮುರಿದು ಬಿದ್ದಿದ್ದು ಸುತ್ತಲೂ ಅಶುಚಿತ್ವ ಆವರಿಸಿದೆ. ಸುಡುವ ಬಿಸಿಲು ಹಾಗೂ ಮಳೆಯಲ್ಲಿ ಬಸ್ಗಾಗಿ ಕಾಯುವ ಪ್ರಯಾಣಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕುಡಿಯಲು ಒಂದು ಹನಿ ನೀರೂ ಸಿಗದಂತಾಗಿದೆ.
ರಾಮದುರ್ಗ ಶಾಸಕ ಅಶೋಕ್ ಪಟ್ಟಣ್ ಅವರು ಹೊಸ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸುವುದಾಗಿ ಭರವಸೆ ನೀಡುತ್ತಿದ್ದರೂ, ಪ್ರಸ್ತುತ ಚಾಲ್ತಿಯಲ್ಲಿರುವ ಬಸ್ ನಿಲ್ದಾಣದ ಕನಿಷ್ಠ ನಿರ್ವಹಣೆ ಮಾಡದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಅಧಿಕಾರಿಗಳು ಹಾಗೂ ತಾಲೂಕು ಆಡಳಿತ ತಕ್ಷಣವೇ ಭೇಟಿ ನೀಡಿ, ನೀರಿನ ಘಟಕವನ್ನು ದುರಸ್ತಿಗೊಳಿಸಿ ನೈರ್ಮಲ್ಯ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.


