
ಸರಗೂರು: ಗಣೇಶೋತ್ಸವ ಅನುಮತಿಗೆ ತಾಲೂಕು ಕಚೇರಿಯಲ್ಲಿ 'ಸಿಂಗಲ್ ವಿಂಡೋ' ವ್ಯವಸ್ಥೆ ಜಾರಿ
ಮುಂಬರುವ ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸರಗೂರು ತಾಲೂಕಿನಲ್ಲಿ ಸಾರ್ವಜನಿಕ ಗಣೇಶೋತ್ಸವ ಆಯೋಜಕರು ಅನುಮತಿ ಪಡೆಯಲು ಅನುಭವಿಸುತ್ತಿದ್ದ ಅಲೆದಾಟ ತಪ್ಪಿಸಲು ತಾಲೂಕು ಆಡಳಿತವು ತಾಲೂಕು ಕಚೇರಿಯಲ್ಲಿ 'ಸಿಂಗಲ್ ವಿಂಡೋ' (ಏಕಗವಾಕ್ಷಿ) ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಸರಗೂರು ಪಟ್ಟಣ ಪೊಲೀಸ್ ಠಾಣೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಶಾಂತಿ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದರು.
ಗಣೇಶೋತ್ಸವ ಸಮಿತಿಗಳು ವಿವಿಧ ಸರ್ಕಾರಿ ಕಚೇರಿಗಳಿಗೆ ದಿನಗಟ್ಟಲೆ ಅಲೆದಾಡುವುದನ್ನು ತಪ್ಪಿಸಲು ಈ ನೂತನ ಕ್ರಮ ಕೈಗೊಳ್ಳಲಾಗಿದೆ ಎಂದು ವೃತ್ತ ನಿರೀಕ್ಷಕ ಪ್ರಸನ್ನಕುಮಾರ್ ತಿಳಿಸಿದರು. ಆಯೋಜಕರು ತಾಲೂಕು ಕಚೇರಿಯಲ್ಲಿ ಕೇವಲ ಒಂದು ಅರ್ಜಿಯನ್ನು ಸಲ್ಲಿಸಿದರೆ ಸಾಕು. ನಂತರ ಕಂದಾಯ, ಪೊಲೀಸ್, ಗ್ರಾಮ ಪಂಚಾಯಿತಿ ಹಾಗೂ ಎಸ್ಕಾಂ ಇಲಾಖೆಗಳ ಸಿಬ್ಬಂದಿ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ, ಅಗತ್ಯ ಮಾರ್ಗದರ್ಶನ ಹಾಗೂ ಎನ್ಒಸಿ (NOC) ನೀಡಿ ಒಂದೇ ಸೂರಿನಡಿ ಅನುಮತಿ ಪತ್ರ ವಿತರಿಸಲಿದ್ದಾರೆ.
ಯಾವುದೇ ಕಾರಣಕ್ಕೂ ಅಧಿಕೃತ ಅನುಮತಿ ಪಡೆಯದೆ ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಅಥವಾ ಕಾರ್ಯಕ್ರಮಗಳನ್ನು ನಡೆಸಬಾರದು ಎಂದು ಪೊಲೀಸ್ ಇಲಾಖೆ ಎಚ್ಚರಿಸಿದೆ. ಈ ಸಭೆಯಲ್ಲಿ ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಸಿದ್ದರಾಜು, ಎಸ್ಸಿ-ಎಸ್ಟಿ ಸಮಿತಿ ಸದಸ್ಯ ವೇಣುಗೋಪಾಲ್, ದಸಂಸ ಮುಖಂಡ ಹಳಿಯೂರು ನಾಗಣ್ಣ, ಪ್ರಮುಖರಾದ ಸರಗೂರು ಕೃಷ್ಣ, ಪುಟ್ಟ ಹನುಮಯ್ಯ ಹಾಗೂ ಸ್ಥಳೀಯ ಪದಾಧಿಕಾರಿಗಳು ಭಾಗವಹಿಸಿದ್ದರು. ಈ ಏಕಗವಾಕ್ಷಿ ವ್ಯವಸ್ಥೆಯು ಸರಗೂರು ತಾಲೂಕಿನ ಸಾರ್ವಜನಿಕರಿಗೆ ಕಾಲಾವಕಾಶ ಉಳಿತಾಯ ಮಾಡುವುದಲ್ಲದೆ ಹಬ್ಬದ ಸಂಭ್ರಮವನ್ನು ಶಾಂತಿಯುತವಾಗಿ ನಡೆಸಲು ನೆರವಾಗಲಿದೆ.


