
ಸಾವುಗಳ ಭಯ, ಮೂಢನಂಬಿಕೆಗೆ ಅಂಜಿಕೆ: ಜೋಯಿಡಾದ ಬಾಡಗುಂದ ಗ್ರಾಮ ತೊರೆದ 13 ಗೌಳಿ ಕುಟುಂಬಗಳು
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಬಾಡಗುಂದ ಗ್ರಾಮದಲ್ಲಿ ಸಾಲು ಸಾಲು ಸಾವುಗಳ ಆತಂಕ ಹಾಗೂ ಮೂಢನಂಬಿಕೆಯ ಹಿನ್ನೆಲೆಯಲ್ಲಿ ಗೌಳಿ ಸಮುದಾಯದ 13 ಕುಟುಂಬಗಳು ತಮ್ಮ ಮನೆಗಳನ್ನು ತೊರೆದು ಗ್ರಾಮದಿಂದ ವಲಸೆ ಹೋಗಿರುವ ಆತಂಕಕಾರಿ ಘಟನೆ ವರದಿಯಾಗಿದೆ. ಬಾಡಗುಂದದ ಗೌಳಿವಾಡದಲ್ಲಿ ಒಟ್ಟು 18 ಕುಟುಂಬಗಳ 103 ಜನರು ವಾಸಿಸುತ್ತಿದ್ದು, ಈ ಪೈಕಿ 13 ಕುಟುಂಬಗಳ 74 ಮಂದಿ ತಮ್ಮ ಸುಸಜ್ಜಿತ ಮನೆಗಳು ಹಾಗೂ ಕೃಷಿ ಭೂಮಿಯನ್ನು ಬಿಟ್ಟು ಬೇರೆಡೆಗೆ ತೆರಳಿ ತಾತ್ಕಾಲಿಕ ಜೋಪಡಿಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಉಳಿದ 5 ಕುಟುಂಬಗಳೂ ಸಹ ಗ್ರಾಮವನ್ನು ಖಾಲಿ ಮಾಡಲು ಸಿದ್ಧತೆ ನಡೆಸಿವೆ ಎನ್ನಲಾಗಿದೆ.
ಕಳೆದ ಕೆಲವು ವರ್ಷಗಳಲ್ಲಿ ಈ ಗ್ರಾಮದಲ್ಲಿ ಅಪಘಾತ ಹಾಗೂ ನೀರಿನಲ್ಲಿ ಮುಳುಗಿ ಹಲವು ಯುವಕರು ಅಕಾಲಿಕ ಮರಣ ಹೊಂದಿದ್ದರು. ನಿರಂತರವಾಗಿ ಸಂಭವಿಸಿದ ಈ ಸಾವುಗಳಿಂದ ಆತಂಕಗೊಂಡ ಗ್ರಾಮಸ್ಥರು ಜ್ಯೋತಿಷಿಯೊಬ್ಬರ ಬಳಿ ಸಲಹೆ ಕೇಳಿದ್ದರು. ವಾಸಿಸುತ್ತಿರುವ ಜಾಗದಲ್ಲೇ ದೋಷವಿದ್ದು, ಇಲ್ಲೇ ಮುಂದುವರಿದರೆ ಇನ್ನಷ್ಟು ಸಾವುಗಳು ಸಂಭವಿಸಲಿವೆ ಎಂದು ಅವರು ಹೇಳಿದ್ದರೆನ್ನಲಾಗಿದೆ. ಇದರಿಂದ ಹೆದರಿದ ಗೌಳಿ ಸಮುದಾಯದ ಜನರು, ತಲೆತಲಾಂತರದಿಂದ ಹೈನುಗಾರಿಕೆ ಹಾಗೂ ಕೃಷಿ ಮಾಡಿಕೊಂಡಿದ್ದ ಗ್ರಾಮವನ್ನೇ ತೊರೆಯಲು ನಿರ್ಧರಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಜೋಯಿಡಾ ತಹಸೀಲ್ದಾರ್ ಮಂಜುನಾಥ ಮುನ್ನೊಳ್ಳಿ ಹಾಗೂ ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಬಾಡಗುಂದ ಗೌಳಿವಾಡಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜನರಲ್ಲಿ ಮನೆಮಾಡಿರುವ ಮೂಢನಂಬಿಕೆ ಹಾಗೂ ಭೀತಿಯನ್ನು ದೂರಗೊಳಿಸಲು ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದು, ಸುರಕ್ಷಿತವಾಗಿ ತಮ್ಮ ಮನೆಗಳಿಗೆ ಹಿಂತಿರುಗುವಂತೆ ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಕಾಡು ಪ್ರದೇಶದ ಗ್ರಾಮೀಣ ಭಾಗಗಳಲ್ಲಿ ಇಂತಹ ಮೂಢನಂಬಿಕೆಗಳು ಜನರನ್ನು ಬಾಧಿಸುತ್ತಿರುವುದು ಜೋಯಿಡಾ ತಾಲೂಕಿನ ಜನರಲ್ಲಿ ಕಳವಳ ಮೂಡಿಸಿದ್ದು, ಆಡಳಿತ ಯಂತ್ರದ ಜಾಗೃತಿ ಕಾರ್ಯಕ್ರಮಗಳ ಅಗತ್ಯವನ್ನು ಎತ್ತಿಹಿಡಿದಿದೆ.


