
ಸೇಡಂ ತಾಲೂಕಿನ ಮೀನಹಬಲ್ನಲ್ಲಿ 4 ವರ್ಷದ ಬಾಲಕಿ ಮೇಲೆ ಬೀದಿ ನಾಯಿಗಳ ದಾಳಿ: ಗಂಭೀರ ಗಾಯ
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮೀನಹಬಲ್ ಗ್ರಾಮದಲ್ಲಿ ಬೀದಿ ನಾಯಿಗಳ ಕಾಟಕ್ಕೆ ನಾಲ್ಕು ವರ್ಷದ ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡಿರುವ ಆತಂಕಕಾರಿ ಘಟನೆ ವರದಿಯಾಗಿದೆ. ಗ್ರಾಮದ ನಿವಾಸಿಗಳ ಪ್ರಕಾರ, ಸಾನ್ವಿ ಎಂಬ ನಾಲ್ಕು ವರ್ಷದ ಬಾಲಕಿ ತನ್ನ ಮನೆಯ ಅಂಗಳದ ಬಳಿ ಆಟವಾಡುತ್ತಿದ್ದಾಗ ಹಿಂಡಾಗಿ ಬಂದ ಬೀದಿ ನಾಯಿಗಳು ಏಕಾಏಕಿ ಆಕೆಯ ಮೇಲೆ ದಾಳಿ ನಡೆಸಿವೆ.
ದಾಳಿಯ ಪರಿಣಾಮವಾಗಿ ಬಾಲಕಿಯ ಮುಖ, ತುಟಿ ಮತ್ತು ಕೆನ್ನೆಗಳಿಗೆ ಆಳವಾದ ಗಾಯಗಳಾಗಿದ್ದವು. ಕಂದಮ್ಮನ ಆಕ್ರಂದನ ಕೇಳಿ ಧಾವಿಸಿದ ಸ್ಥಳೀಯ ನಿವಾಸಿಗಳು ಮತ್ತು ಕುಟುಂಬಸ್ಥರು ತಕ್ಷಣ ನಾಯಿಗಳನ್ನು ಬೆದರಿಸಿ ಓಡಿಸಿದ್ದಾರೆ. ಬಳಿಕ ಗಾಯಗೊಂಡ ಬಾಲಕಿಯನ್ನು ಶೀಘ್ರವಾಗಿ ಸೇಡಂನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ತುರ್ತು ಚಿಕಿತ್ಸೆ ಕೊಡಿಸಲಾಯಿತು. ವೈದ್ಯರು ಬಾಲಕಿಯ ಮುಖ ಹಾಗೂ ತುಟಿಯ ಆಳವಾದ ಗಾಯಗಳಿಗೆ ಹೊಲಿಗೆಗಳನ್ನು ಹಾಕಿ ಚಿಕಿತ್ಸೆ ನೀಡಿದ್ದಾರೆ.
ಈ ಭೀಕರ ಘಟನೆಯು ಮೀನಹಬಲ್ ಹಾಗೂ ಸೇಡಂ ತಾಲೂಕಿನ ಸುತ್ತಮುತ್ತಲ ಗ್ರಾಮಸ್ಥರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮಗಳಲ್ಲಿ ಹಾಗೂ ಬೀದಿಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಮಿತಿಮೀರುತ್ತಿದ್ದರೂ ಸ್ಥಳೀಯ ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ತಕ್ಷಣವೇ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಹಾಗೂ ಸಂತಾನಶಕ್ತಿ ಹರಣ ಚಿಕಿತ್ಸೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


