
ಶಿರಾ ತಾಲೂಕಿನಲ್ಲಿ 'ಪ್ರಜಾ ಸೇವಾ' ಅಭಿಯಾನಕ್ಕೆ ಶಾಸಕ ಟಿ.ಬಿ. ಜಯಚಂದ್ರ ಚಾಲನೆ
ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರಲು ಹಾಗೂ ಭ್ರಷ್ಟಾಚಾರ ರಹಿತ ಸೇವೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ಶಿರಾ ತಾಲೂಕಿನ ಗೌಡಗೆರೆ ಹೋಬಳಿ ನಾಡಕಚೇರಿ ಆವರಣದಲ್ಲಿ 'ಪ್ರಜಾ ಸೇವಾ' ಜನಸಭೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿರಾ ಶಾಸಕ ಟಿ.ಬಿ. ಜಯಚಂದ್ರ ಅವರು, ಈ ಹಿಂದೆ ಜಾರಿಯಲ್ಲಿದ್ದ 'ಜನಸ್ಪಂದನ' ಕಾರ್ಯಕ್ರಮದ ಬದಲಿಗೆ ಪ್ರಜಾ ಸೇವಾ ಕಾರ್ಯಕ್ರಮವನ್ನು ನೂತನವಾಗಿ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರು ತಮ್ಮ ಸ್ಥಳೀಯ ಕುಂದುಕೊರತೆಗಳು ಹಾಗೂ ಆಡಳಿತಾತ್ಮಕ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಶಾಸಕರು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಶಿರಾ ತಹಶೀಲ್ದಾರ್ ಆನಂದ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಸ್ಥಳೀಯ ಸಾರ್ವಜನಿಕರಿಂದ ಸ್ವೀಕರಿಸಲಾದ ಕುಂದುಕೊರತೆ ಅರ್ಜಿಗಳನ್ನು ಪರಿಶೀಲಿಸಿದ ಶಾಸಕರು, ಗ್ರಾಮಸ್ಥರ ಅರ್ಜಿಗಳನ್ನು ತಡಮಾಡದೆ ಶೀಘ್ರವಾಗಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಿದರು.
ಶಿರಾ ತಾಲೂಕಿನ ಗ್ರಾಮೀಣ ಪ್ರದೇಶದ ಜನರಿಗೆ ಹೋಬಳಿ ಮಟ್ಟದಲ್ಲೇ ಸರಕಾರಿ ಸೇವೆಗಳು ದೊರೆಯುವುದರಿಂದ ತಾಲೂಕು ಕೇಂದ್ರಗಳಿಗೆ ಪದೇ ಪದೇ ಅಲೆಯುವುದು ತಪ್ಪಲಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ನಾಡಕಚೇರಿಗಳಲ್ಲಿ ನಡೆಯುವ ಪ್ರಜಾ ಸೇವಾ ಸಭೆಗಳ ಪ್ರಯೋಜನ ಪಡೆದುಕೊಳ್ಳಬಹುದು.


