
ಸಿವಿಲ್ ವಿವಾದದಲ್ಲಿ ಅಕ್ರಮ ಬಂಧನ: ಮೂವರು ಪೊಲೀಸ್ ಅಧಿಕಾರಿಗಳಿಗೆ ₹3 ಲಕ್ಷ ವೈಯಕ್ತಿಕ ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್
ಸಿವಿಲ್ ಆಸ್ತಿ ವಿವಾದ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬರನ್ನು ನಿಯಮಬಾಹಿರವಾಗಿ ಬಂಧಿಸಿದ್ದ ಬೆಂಗಳೂರಿನ ವೈಟ್ಫೀಲ್ಡ್ ಪೊಲೀಸ್ ಅಧಿಕಾರಿಗಳಿಗೆ ಕರ್ನಾಟಕ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಮೂವರು ಅಧಿಕಾರಿಗಳಿಗೆ ತಲಾ ವೈಯಕ್ತಿಕ ಹಣದಿಂದ ಒಟ್ಟು ₹3 ಲಕ್ಷ ದಂಡ ವಿಧಿಸಿದೆ. ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದ ವಿವಾದಾತ್ಮಕ ಉಯಿಲಿಗೆ ಸಾಕ್ಷಿದಾರರಾಗಿ (ಅಟೆಸ್ಟಿಂಗ್ ವಿಟ್ನೆಸ್) ಸಹಿ ಮಾಡಿದ್ದ ಕೆ.ಎನ್. ಮೋಹನ್ ರೆಡ್ಡಿ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಮಹತ್ವದ ಆದೇಶ ನೀಡಿದೆ.
ವೈಟ್ಫೀಲ್ಡ್ ಪೊಲೀಸರು ಆಗಸ್ಟ್ 25 ರಂದು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಯ ಸೆಕ್ಷನ್ 35(3) ರ ಅಡಿಯಲ್ಲಿ ಮೋಹನ್ ರೆಡ್ಡಿ ಅವರಿಗೆ ನೋಟಿಸ್ ನೀಡಿದ್ದು, ಆಗಸ್ಟ್ 27 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ, ನಿಗದಿತ ಸಮಯಕ್ಕಿಂತ 48 ಗಂಟೆಗಳ ಮುಂಚಿತವಾಗಿ, ಅಂದರೆ ಆಗಸ್ಟ್ 25 ರಂದೇ ಪೊಲೀಸರು ಅವರ ಮನೆಗೆ ತೆರಳಿ ಅಕ್ರಮವಾಗಿ ವಶಕ್ಕೆ ಪಡೆದಿದ್ದರು. ಈ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದ ಹೈಕೋರ್ಟ್, "ಬಂಧಿಸುವ ಅಧಿಕಾರವಿದೆ ಎಂದಾಕ್ಷಣ ಅದನ್ನು ಹೇಗೆ ಬೇಕಾದರೂ ಬಳಸಲು ಲೈಸೆನ್ಸ್ ಸಿಕ್ಕಂತಲ್ಲ" ಎಂದು ಎಚ್ಚರಿಸಿದ್ದಲ್ಲದೆ, ಇಂತಹ "ಪೊಲೀಸ್ ರಾಜ್" ಸಂಸ್ಕೃತಿಯನ್ನು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿತು.
ಈ ದಂಡದ ಮೊತ್ತ ₹3 ಲಕ್ಷವನ್ನು ತನಿಖಾಧಿಕಾರಿ (ಸಬ್-ಇನ್ಸ್ಪೆಕ್ಟರ್), ಸಹಾಯಕ ಪೊಲೀಸ್ ಕಮಿಷನರ್ (ACP) ಹಾಗೂ ಉಪ ಪೊಲೀಸ್ ಕಮಿಷನರ್ (DCP) ಅವರ ವೈಯಕ್ತಿಕ ವೇತನದಿಂದಲೇ ಪಾವತಿಸಬೇಕು ಮತ್ತು ಸರಕಾರಿ ಖಜಾನೆಯ ಹಣವನ್ನು ಬಳಸಬಾರದು ಎಂದು ಸ್ಪಷ್ಟಪಡಿಸಿದೆ. ಇದರೊಂದಿಗೆ, ಶಾಸನಬದ್ಧ ನಿಯಮಗಳನ್ನು ಗಾಳಿಗೆ ತೂರಿ ಶಿಸ್ತು ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆಯೂ ಹೈಕೋರ್ಟ್ ನಿರ್ದೇಶನ ನೀಡಿದೆ.


