
'ಸ್ಯಾಮ್ಸಂಗ್ ಇನ್ನೋವೇಶನ್ ಕ್ಯಾಂಪಸ್ 2026' ಕರ್ನಾಟಕದಲ್ಲಿ ಪ್ರಾರಂಭ: 2,000 ವಿದ್ಯಾರ್ಥಿಗಳಿಗೆ ಎಐ ತರಬೇತಿ
ಕರ್ನಾಟಕದ ಯುವಜನರಲ್ಲಿ ಕೃತಕ ಬುದ್ಧಿಮತ್ತೆ (ಎಐ), ಜನರೇಟಿವ್ ಎಐ, ಕೋಡಿಂಗ್ ಹಾಗೂ ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ನಂತಹ ಆಧುನಿಕ ತಂತ್ರಜ್ಞಾನ ಕೌಶಲ್ಯಗಳನ್ನು ಬೆಳೆಸಲು ಸ್ಯಾಮ್ಸಂಗ್ ಇಂಡಿಯಾ 'ಸ್ಯಾಮ್ಸಂಗ್ ಇನ್ನೋವೇಶನ್ ಕ್ಯಾಂಪಸ್ (SIC) 2026' ಯೋಜನೆಯನ್ನು ಅಧಿಕೃತವಾಗಿ ಚಾಲನೆಗೊಳಿಸಿದೆ. ಬೆಂಗಳೂರಿನ ಎಫ್ಕೆಸಿಸಿಐ (FKCCI) ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಈ ಬೃಹತ್ ತರಬೇತಿ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಯೋಜನೆಯಡಿ ರಾಜ್ಯಾದ್ಯಂತ ಸುಮಾರು 2,000 ವಿದ್ಯಾರ್ಥಿಗಳಿಗೆ ಉದ್ಯೋಗಾವಶ್ಯಕ ತಾಂತ್ರಿಕ ತರಬೇತಿ ನೀಡಲಾಗುತ್ತದೆ. ಎಲೆಕ್ಟ್ರಾನಿಕ್ಸ್ ಸೆಕ್ಟರ್ ಸ್ಕಿಲ್ಸ್ ಕೌನ್ಸಿಲ್ ಆಫ್ ಇಂಡಿಯಾ (ESSCI) ಮತ್ತು ಟೆಲಿಕಾಂ ಸೆಕ್ಟರ್ ಸ್ಕಿಲ್ ಕೌನ್ಸಿಲ್ (TSSC) ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲಾಗುತ್ತಿದೆ. ತರಬೇತಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಕೇವಲ ಸೈದ್ಧಾಂತಿಕ ಶಿಕ್ಷಣವಲ್ಲದೆ, ತಜ್ಞರ ಮಾರ್ಗದರ್ಶನ ಹಾಗೂ ಪ್ರಾಯೋಗಿಕ ಜ್ಞಾನವನ್ನು ಒದಗಿಸಲಾಗುತ್ತದೆ.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಉದ್ಯಮ ರಂಗ ಮತ್ತು ಶೈಕ್ಷಣಿಕ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡುವುದರಿಂದ ಯುವಜನರಿಗೆ ಉತ್ತಮ ಉದ್ಯೋಗಾವಕಾಶಗಳು ಸಿಗಲಿವೆ ಎಂದು ಅಭಿಪ್ರಾಯಪಟ್ಟರು. ಸ್ಯಾಮ್ಸಂಗ್ ತನ್ನ ಜಾಗತಿಕ ಸಿಎಸ್ಆರ್ ದೃಷ್ಟಿಕೋನದಡಿ ಭಾರತದ 10 ರಾಜ್ಯಗಳಲ್ಲಿ 20,000 ಯುವಕರಿಗೆ ಎಐ ತರಬೇತಿ ನೀಡುವ ಗುರಿ ಹೊಂದಿದ್ದು, ಕರ್ನಾಟಕದಲ್ಲಿ ಈ ಅಭಿಯಾನವು ಮಹತ್ವದ ಮೈಲಿಗಲ್ಲಾಗಲಿದೆ.


