
ವಾಮಾಚಾರದ ನೆಪದಲ್ಲಿ ₹22.5 ಲಕ್ಷ ಮೌಲ್ಯದ ಚಿನ್ನ-ಹಣ ವಂಚನೆ: ಭದ್ರಾವತಿಯಲ್ಲಿ ಆರೋಪಿ ಬಂಧನ
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಮಾಚಾರದ ಭಯ ಹುಟ್ಟಿಸಿ ಮಹಿಳೆಯೊಬ್ಬರಿಂದ ₹22.50 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಪಡೆದು ವಂಚಿಸಿದ್ದ ಆರೋಪಿಯನ್ನು ಪೊಲೀಸರು ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಭದ್ರಾವತಿ ತಾಲೂಕಿನ ತಿಪ್ಲಾಪುರ ಕ್ಯಾಂಪ್ ನಿವಾಸಿ ಮುರಳಿ ಅಲಿಯಾಸ್ ಕರಿಯಾ (31) ಎಂದು ಗುರುತಿಸಲಾಗಿದೆ. ಪೊಲೀಸರ ವಿವರಣೆ ಪ್ರಕಾರ, ಭದ್ರಾವತಿ ಗಾಂಧಿನಗರದ ನಿವಾಸಿ ಹಾಗೂ ಕೆಎಸ್ಆರ್ಟಿಸಿ ನೌಕರರಾಗಿರುವ ಮಂಗಳ ನಾಯಕ್ ಅವರಿಗೆ ಪರಿಚಯವಾಗಿದ್ದ ಮುರಳಿ ಮತ್ತು ಆತನ ಸಹೋದರ ರವಿ, ನಿಮ್ಮ ಹಾಗೂ ಮಕ್ಕಳ ಮೇಲೆ ವಾಮಾಚಾರ ಪ್ರಯೋಗವಾಗಿದೆ ಎಂದು ನಂಬಿಸಿದ್ದರು. ಸೆಪ್ಟೆಂಬರ್ 7ರಂದು ಮನೆಗೆ ಬಂದು ಪೂಜೆ ನಡೆಸಿದ ಆರೋಪಿಗಳು, ವಿಶೇಷ ಪೂಜೆ ಮಾಡಿ ವಾಪಸ್ ನೀಡುವ ನೆಪದಲ್ಲಿ 193 ಗ್ರಾಂ ಚಿನ್ನಾಭರಣ ಹಾಗೂ ₹2 ಲಕ್ಷ ನಗದು ಪಡೆದುಕೊಂಡು ಪರಾರಿಯಾಗಿದ್ದರು.
ಮಹಿಳೆ ನೀಡಿದ ದೂರಿನನ್ವಯ ಹೊಸಮನೆ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಕಲಂ 316(2) ಹಾಗೂ 318(4) ರಡಿ ಪ್ರಕರಣ ದಾಖಲಾಗಿತ್ತು. ಭದ್ರಾವತಿ ಡಿವೈಎಸ್ಪಿ ಪ್ರಕಾಶ್ ರಾಥೋಡ್ ಹಾಗೂ ಸಿಪಿಐ ನಾಗಮ್ಮ ಮಾರ್ಗದರ್ಶನದಲ್ಲಿ, ಹೊಸಮನೆ ಠಾಣೆ ಪಿಎಸ್ಐ ಸಿದ್ದಪ್ಪ ಎಂ.ಪಿ. ನೇತೃತ್ವದ ತಂಡ ತಕ್ಷಣ ದಾಳಿ ನಡೆಸಿ ಆರೋಪಿ ಮುರಳಿಯನ್ನು ಬಂಧಿಸಿದೆ. ಆತನಿಂದ ಅಡಮಾನ ಇಟ್ಟಿದ್ದ ಚಿನ್ನ ಸೇರಿ ಒಟ್ಟು 161 ಗ್ರಾಂ ತೂಕದ ₹22.5 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಚಿನ್ನದ ಗಟ್ಟಿಯನ್ನು ಜಪ್ತಿ ಮಾಡಲಾಗಿದೆ. ಭದ್ರಾವತಿ ಪೊಲೀಸರ ಚಾಣಾಕ್ಷ ಹಾಗೂ ಕ್ಷಿಪ್ರ ಕಾರ್ಯಾಚರಣೆಯನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಶ್ಲಾಘಿಸಿದ್ದಾರೆ.


