
ವಂದೇ ಮಾತರಂ ಗೀತೆಯನ್ನು 2 ನುಡಿಗಳಿಗೆ ಸೀಮಿತಗೊಳಿಸಿದ ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್ನಲ್ಲಿ ಪಿಐಎಲ್
ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಗೀತೆಯಾದ 'ವಂದೇ ಮಾತರಂ'ನ ಮೊದಲ ಎರಡು ನುಡಿಗಳನ್ನು ಮಾತ್ರ ಗಾಯನ ಮಾಡಬೇಕು ಎಂದು ಹೊರಡಿಸಲಾಗಿರುವ ರಾಜ್ಯ ಸರ್ಕಾರದ ನಿರ್ದೇಶನವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಸೆಪ್ಟೆಂಬರ್ 8 ರಂದು ಹೊರಡಿಸಿದ ಸರ್ಕಾರಿ ಆದೇಶ ಹಾಗೂ ಸೆಪ್ಟೆಂಬರ್ 3 ರ ಸಂಪುಟ ಸಭೆಯ ತೀರ್ಮಾನವನ್ನು ರದ್ದುಪಡಿಸುವಂತೆ ಕೋರಿ ವಕೀಲ ಗಿರೀಶ್ ಭಾರದ್ವಾಜ್ ಈ ಅರ್ಜಿ ಸಲ್ಲಿಸಿದ್ದಾರೆ.
ಸರ್ಕಾರದ ಆದೇಶದ ಪ್ರಕಾರ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ ಅಥವಾ ರಾಜ್ಯಪಾಲರು ಭಾಗವಹಿಸುವ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಉಳಿದೆಲ್ಲಾ ರಾಜ್ಯ ಸರ್ಕಾರಿ ಸಮಾರಂಭಗಳಲ್ಲಿ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ಸೂಚಿಸಲಾಗಿದೆ. ಆದರೆ, ರಾಷ್ಟ್ರೀಯ ಸಂಕೇತ ಹಾಗೂ ರಾಷ್ಟ್ರೀಯ ಗೀತೆಯ ಅಧಿಕೃತ ರೂಪವನ್ನು ನಿರ್ಧರಿಸುವ ಹಕ್ಕು ಸಂವಿಧಾನದ ಪ್ರಕಾರ ಕೇಂದ್ರ ಸಂಸತ್ತಿಗೆ ಮಾತ್ರ ಸೇರಿದ್ದು, ರಾಜ್ಯ ಸರ್ಕಾರಕ್ಕೆ ಅಂತಹ ಕಾರ್ಯಾಂಗ ಅಧಿಕಾರವಿಲ್ಲ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.
ಕೇಂದ್ರ ಗೃಹ ಸಚಿವಾಲಯವು ಜುಲೈ 9 ರಂದು ಎಲ್ಲಾ ರಾಜ್ಯಗಳಿಗೆ ಕಳುಹಿಸಿರುವ ಸುತ್ತೋಲೆಯಲ್ಲಿ ವಂದೇ ಮಾತರಂನ ಸಂಪೂರ್ಣ 6 ನುಡಿಗಳ ಅಧಿಕೃತ ಗಾಯನವನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿರುವುದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ನಿಯಮಾವಳಿಗಳನ್ನು ಗಾಳಿಗೆ ತೂರಿ ಸಂಪುಟ ಸಭೆಯಲ್ಲಿ ಅನೌಪಚಾರಿಕವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ದೂರಲಾಗಿದ್ದು, ಈ ಪ್ರಕರಣವು ಹೈಕೋರ್ಟ್ನ ದ್ವಿಪೀಠದ ಮುಂದೆ ಶೀಘ್ರದಲ್ಲೇ ವಿಚಾರಣೆಗೆ ಬರಲಿದೆ.


