
ವಿಚಾರಣಾಧೀನ ಕೈದಿಗೆ ವಿಶೇಷ ಆತಿಥ್ಯ: ಮಂಡ್ಯ ಜೈಲು ಹಾಗೂ ಮಿಸ್ಮ್ ಆಸ್ಪತ್ರೆ ಅಧಿಕಾರಿಗಳ ವಿರುದ್ಧ ಪ್ರಕರಣ
ವಿಚಾರಣಾಧೀನ ಕೈದಿಗೆ ನಿಯಮಬಾಹಿರವಾಗಿ ಆಸ್ಪತ್ರೆ ದಾಖಲಾತಿ ಹಾಗೂ ವಿಶೇಷ ಸೌಲಭ್ಯ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್) ಆಸ್ಪತ್ರೆ ಮತ್ತು ಮಂಡ್ಯ ಜಿಲ್ಲಾ ಕಾರಾಗೃಹದ ಹಿರಿಯ ಅಧಿಕಾರಿಗಳು ಸೇರಿದಂತೆ 10 ಸರ್ಕಾರಿ ನೌಕರರ ವಿರುದ್ಧ ಕರ್ನಾಟಕ ಉಪ ಲೋಕಾಯುಕ್ತ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಬೋಗಸ್ ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ಆಗಸ್ಟ್ 6 ರಂದು ಬಂಧಿತನಾಗಿದ್ದ ಭೂದಾಖಲೆಗಳ ಇಲಾಖೆಯ ಮಾಜಿ ಸಹಾಯಕ ನಿರ್ದೇಶಕ (ಎಡಿಎಲ್ಆರ್) ಮಹಮ್ಮದ್ ಹುಸೇನ್ ಅವರಿಗೆ ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿದ್ದಾಗ ನ್ಯಾಯಾಲಯದ ಅನುಮತಿಯಿಲ್ಲದೆ ಮಿಮ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿತ್ತು. ಜಿಲ್ಲಾ ಸತ್ರ ನ್ಯಾಯಾಧೀಶರು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದಾಗ ಕೈದಿಯು ಖಾಸಗಿ ಕೊಠಡಿಯಲ್ಲಿರುವುದು ಕಂಡುಬಂದಿದ್ದು, ಇದು ತೀವ್ರ ಭದ್ರತಾ ಲೋಪವನ್ನು ಬಯಲಿಗೆಳೆದಿತ್ತು.
ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಮಿಮ್ಸ್ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಕಾರಾಗೃಹದ ಮಾಜಿ ಹಾಗೂ ಹಾಲಿ ಸೂಪರಿಂಟೆಂಡೆಂಟ್ ಮತ್ತು ನಾಲ್ವರು ಸಶಸ್ತ್ರ ಮೀಸಲು ಪಡೆ (ಡಿಎಆರ್) ಕಾನ್ಸ್ಟೇಬಲ್ಗಳಿಗೆ ಸಮನ್ಸ್ ಜಾರಿ ಮಾಡಿದ್ದು, ಅಕ್ಟೋಬರ್ 28 ರಂದು ಖುದ್ದಾಗಿ ಹಾಜರಾಗುವಂತೆ ಸೂಚಿಸಿದ್ದಾರೆ. ಜೈಲಿನೊಳಗೆ ಲಂಚ ಪಡೆದು ವಿಶೇಷ ಸೌಲಭ್ಯ ನೀಡಲಾಗುತ್ತಿದೆ ಎಂಬ ವಿಚಾರಣಾಧೀನ ಕೈದಿಗಳ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.


