
ವಿಟಿ ಯು ರಾಜ್ಯ ಮಟ್ಟದ ಕ್ರಾಸ್ ಕಂಟ್ರಿ ಚಾಂಪಿಯನ್ಷಿಪ್: ಮಂಗಳೂರಿನ ಸೆಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿಗೆ ಸರಣಿ ಪದಕ
ಮಂಗಳೂರಿನ ವಾಮಂಜೂರಿನ ಸೆಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ (SJEC) ಕ್ರೀಡಾಪಟುಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಆಯೋಜಿಸಿದ್ದ ರಾಜ್ಯ ಮಟ್ಟದ ಕ್ರಾಸ್ ಕಂಟ್ರಿ ಚಾಂಪಿಯನ್ಷಿಪ್ 2026 ರಲ್ಲಿ ಗಮನಾರ್ಹ ಯಶಸ್ಸು ಸಾಧಿಸಿದ್ದಾರೆ. ಈ ರಾಜ್ಯ ಮಟ್ಟದ ಸ್ಪರ್ಧೆಯು ಮೈಸೂರಿನ ವಿಟಿ ಯು ಪ್ರಾದೇಶಿಕ ಕಚೇರಿ ಆವರಣದಲ್ಲಿ ಸೆಪ್ಟೆಂಬರ್ 7 ಮತ್ತು 8 ರಂದು ನಡೆದಿತ್ತು.
ಉತ್ತಮ ದೈಹಿಕ ಸಾಮರ್ಥ್ಯ ಹಾಗೂ ತಂಡದ ಸಮನ್ವಯತೆಯಿಂದ ಓಡಿದ ಸೆಂಟ್ ಜೋಸೆಫ್ ಕಾಲೇಜಿನ ಪುರುಷರ ತಂಡವು ಒಟ್ಟಾರೆ ಚಾಂಪಿಯನ್ಷಿಪ್ನಲ್ಲಿ ದ್ವಿತೀಯ ರನ್ನರ್-ಅಪ್ (ಮೂರನೇ ಸ್ಥಾನ) ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ತಂಡದಲ್ಲಿದ್ದ ಶಶಾಂಕ್ ಎಸ್, ಅಕ್ಷಯ್ ಗೇಬ್ರಿಯಲ್ ಆರ್, ಸಾತ್ವಿಕ್, ಯೋಗೇಶ್ ಎ ಸಿ, ಶ್ರೀಪತಿ ಕುಲಾಲ್, ಗಗನ್ ಜಿ ಬಜಪೆ ಮತ್ತು ಹನುಮಪ್ಪ ದ್ಯಾವಪ್ಪ ಅವರ ಶ್ರಮಕ್ಕೆ ಪ್ರಶಸ್ತಿ ಒಲಿದಿದೆ. ಇನ್ನು ಕಾಲೇಜಿನ ಮಹಿಳೆಯರ ಕ್ರಾಸ್ ಕಂಟ್ರಿ ತಂಡವು ಸಹ ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟದಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ವಿದ್ಯಾರ್ಥಿಗಳ ಈ ಕ್ರೀಡಾ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ದೈಹಿಕ ಶಿಕ್ಷಣ ವಿಭಾಗ ಪ್ರಶಂಸೆ ವ್ಯಕ್ತಪಡಿಸಿದೆ.


