
ಯಡ್ರಾಮಿ ತಾಲೂಕನ್ನು ಬರಪೀಡಿತ ಘೋಷಿಸಿ ಬೆಳೆ ವಿಮೆ ಪರಿಹಾರ ಕೊಡಿ: ಬಂದ್ಗೆ ಭಾರಿ ಬೆಂಬಲ
ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನಲ್ಲಿ ತೀವ್ರ ಮುಂಗಾರು ಮಳೆ ಅಭಾವದಿಂದ ಬೆಳೆ ನಷ್ಟ ಉಂಟಾಗಿದ್ದು, ತಾಲೂಕನ್ನು ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಿ ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ಯಡ್ರಾಮಿ ಪಟ್ಟಣ ಬಂದ್ ಹಾಗೂ ಬೃಹತ್ ಪ್ರತಿಭಟನೆ ಜರುಗಿತು. ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ಅನ್ನದಾತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಸ್ಥಳೀಯ ವರ್ತಕರು ಮತ್ತು ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಅಂಗಡಿ-ಮುಗ್ಗಟ್ಟುಗಳನ್ನು ಮುಚ್ಚಿದ್ದರಿಂದ ಪಟ್ಟಣದ ಮುಖ್ಯ ರಸ್ತೆಗಳು ಜನಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು.
ಪಟ್ಟಣದ ಸರ್ದಾರ್ ಶರಣಗೌಡ ವೃತ್ತದಿಂದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ರೈತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ನೂರಾರು ರೈತರು ಅಂಬೇಡ್ಕರ್ ಸರ್ಕಲ್ನಲ್ಲಿ ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಕಾರ್ಯದರ್ಶಿ ಅಲ್ಲಾಪಟೇಲ್ ಇಜೇರಿ ಮಾತನಾಡಿ, ರೈತರ ಕಷ್ಟಗಳಿಗೆ ಸ್ಪಂದಿಸುವುದು ಸರ್ಕಾರ ಮತ್ತು ಅಧಿಕಾರಿಗಳ ಮೊದಲ ಕರ್ತವ್ಯವಾಗಿದೆ ಎಂದರು. ತಾಲೂಕನ್ನು ತಕ್ಷಣ ಬರಪೀಡಿತ ಎಂದು ಘೋಷಿಸಿ ಎಕರೆಗೆ 50,000 ರೂ. ಪರಿಹಾರ ನೀಡಬೇಕು, ಬೆಳೆ ವಿಮೆಯ ಎರಡನೇ ಕಂತಿನ ಹಣ ಬಿಡುಗಡೆಗೊಳಿಸಬೇಕು, ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡಬೇಕು ಮತ್ತು ಜಾನುವಾರುಗಳಿಗೆ ಉಚಿತ ಮೇವು ಪೂರೈಸಬೇಕು ಎಂದು ಪ್ರತಿಭಟನಾನಿರತ ರೈತರು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.


