
ಯಲಬುರ್ಗಾ ತಾಲೂಕಿನ ಕರಮುಡಿಯಿಂದ ಹೊಸಪೇಟೆಗೆ ನೂತನ ಬಸ್ ಸೇವೆ ಆರಂಭ
ಯಲಬುರ್ಗಾ ತಾಲೂಕಿನ ಕರಮುಡಿ ಗ್ರಾಮದ ಗ್ರಾಮೀಣ ಪ್ರಯಾಣಿಕರ ಹಾಗೂ ವಿದ್ಯಾರ್ಥಿಗಳ ಬಹುದಿನಗಳ ಬೇಡಿಕೆಗೆ ಕೊನೆಗೂ ಸ್ಪಂದನೆ ಸಿಕ್ಕಿದ್ದು, ಕರಮುಡಿಯಿಂದ ಹೊಸಪೇಟೆಗೆ ಸಂಪರ್ಕ ಕಲ್ಪಿಸುವ ನೂತನ ಬಸ್ ಸೇವೆಗೆ ಬುಧವಾರ ಚಾಲನೆ ನೀಡಲಾಯಿತು. ಸಾರಿಗೆ ಸೌಲಭ್ಯದ ಕೊರತೆಯಿಂದಾಗಿ ಕರಮುಡಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ನಿವಾಸಿಗಳು ಮತ್ತು ವಿದ್ಯಾರ್ಥಿಗಳು ಎದುರಿಸುತ್ತಿದ್ದ ಸುದೀರ್ಘ ಸಮಸ್ಯೆಗೆ ಈ ನೂತನ ಸೇವೆಯಿಂದ ತೆರೆ ಬಿದ್ದಿದೆ.
ಬಸ್ ಸೇವೆ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಯುವ ಮುಖಂಡ ಇಮಾಮಸಾಬ್ ಗುಳೇದಗುಡ್ಡ, ಸಾರ್ವಜನಿಕರ ಸಂಕಷ್ಟವನ್ನು ಅರ್ಥೈಸಿ ಈ ಸಾರಿಗೆ ವ್ಯವಸ್ಥೆ ಕಲ್ಪಿಸಲು ಶ್ರಮಿಸಿದ ಉನ್ನತ ಶಿಕ್ಷಣ ಸಚಿವ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಗ್ರಾಮಸ್ಥರ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಹೊಸಪೇಟೆಯ ಕಾಲೇಜು ಹಾಗೂ ತರಬೇತಿ ಕೇಂದ್ರಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಈ ಮೊದಲು ಸೂಕ್ತ ಸಾರಿಗೆ ಇಲ್ಲದೆ ತೀವ್ರ ತೊಂದರೆಯಾಗುತ್ತಿತ್ತು.
ಈ ನೂತನ ಬಸ್ ಸೇವೆಯಿಂದಾಗಿ ದಿನನಿತ್ಯ ಹೊಸಪೇಟೆಗೆ ಪ್ರಯಾಣಿಸುವ ವಿದ್ಯಾರ್ಥಿಗಳು, ಉದ್ಯೋಗಿಗಳು, ರೈತರು ಹಾಗೂ ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಸಮಯಕ್ಕೆ ಸರಿಯಾದ ಪ್ರಯಾಣದ ಅನುಕೂಲ ಲಭಿಸಲಿದೆ. ಗ್ರಾಮದ ರೈತರಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ಹೊಸಪೇಟೆ ಮಾರುಕಟ್ಟೆಗೆ ಸಾಗಿಸಲು ಕೂಡ ಇದು ಸಹಕಾರಿಯಾಗಲಿದೆ. ಬಸ್ ಆರಂಭದ ವೇಳೆ ಗೌಡಪ್ಪ ಬಳಕುಂದಿ, ಬಸವರಾಜ ನಿಡಶೇಷಿ, ಉಮೇಶ್ ಕುಕನೂರು, ಶರಣಪ್ಪ ಕುರಿ, ರವಿಚಂದ್ರ ಕೆಂಚರಡ್ಡಿ ಹಾಗೂ ಅನೇಕ ಗ್ರಾಮಸ್ಥರು ಹಾಜರಿದ್ದರು.


